ಅಂತರರಾಷ್ಟ್ರೀಯ ಸಾಕ್ಷರತಾ ದಿನ: ಅಕ್ಷರ ಬೆಳಕಿನತ್ತ ಮಾನವೀಯತೆ ಚಾರಿಟೇಬಲ್ ಟ್ರಸ್ಟ್‌ನ ಸಾರ್ಥಕ ಹೆಜ್ಜೆ

​”ಅಕ್ಷರ ಜ್ಞಾನವೇ ಜೀವನದ ಅತಿ ದೊಡ್ಡ ಶಕ್ತಿ. ಶಿಕ್ಷಣವಿಲ್ಲದ ಸಮಾಜ ಬೆಳಕಿಲ್ಲದ ದಾರಿಯಂತೆ.” ಪ್ರತಿಯೊಬ್ಬರಿಗೂ ಕನಿಷ್ಠ ಸಾಕ್ಷರತೆ ದೊರಕಬೇಕು, ಅಕ್ಷರ ಸಂಸ್ಕೃತಿ ಪ್ರತಿಯೊಂದು ಮನೆಗೂ ತಲುಪಬೇಕು ಎಂಬ ಉದಾತ್ತ ಉದ್ದೇಶದಿಂದ ಪ್ರತಿ ವರ್ಷ ಸೆಪ್ಟೆಂಬರ್ 8ರಂದು ‘ಅಂತರರಾಷ್ಟ್ರೀಯ ಸಾಕ್ಷರತಾ ದಿನ’ವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಬೆಳಕು ತಲುಪಿಸಲು ಶ್ರಮಿಸುತ್ತಿರುವ ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ನ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
​ಸಾಕ್ಷರತೆ ಎಂದರೆ ಕೇವಲ ಓದಲು ಮತ್ತು ಬರೆಯಲು ಕಲಿಯುವುದು ಮಾತ್ರವಲ್ಲ; ಅದು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಗೌರವಯುತ ಜೀವನ ನಡೆಸಲು ದಾರಿ ಮಾಡಿಕೊಡುವ ಸಾಧನ. ಆದರೆ, ಇಂದಿಗೂ ನಮ್ಮ ಸಮಾಜದಲ್ಲಿ ಬಡತನ, ಅರಿವಿನ ಕೊರತೆ ಮತ್ತು ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಅನೇಕ ಮಕ್ಕಳು ಹಾಗೂ ಹಿರಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
​ಈ ಸವಾಲನ್ನು ಮೆಟ್ಟಿ ನಿಲ್ಲಲು ‘ಮಾನವೀಯತೆ ಚಾರಿಟೇಬಲ್ ಟ್ರಸ್ಟ್’ ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಪುಸ್ತಕ, ಲೇಖನ ಸಾಮಗ್ರಿ, ಹಾಗೂ ಶಾಲಾ ಶುಲ್ಕದ ನೆರವು ನೀಡುವ ಮೂಲಕ ಟ್ರಸ್ಟ್ ಅಕ್ಷರ ದಾಸೋಹವನ್ನು ನಡೆಸುತ್ತಿದೆ. ಕೇವಲ ಮಕ್ಕಳಷ್ಟೇ ಅಲ್ಲದೆ, ಶಾಲೆ ಮೆಟ್ಟಿಲು ಹತ್ತದ ಹಿರಿಯರಿಗಾಗಿ ‘ವಯಸ್ಕರ ಸಾಕ್ಷರತಾ ಶಿಬಿರ’ಗಳನ್ನು ಆಯೋಜಿಸಿ, ಅವರಿಗೆ ದೈನಂದಿನ ಜೀವನಕ್ಕೆ ಅಗತ್ಯವಿರುವ ಅಕ್ಷರ ಜ್ಞಾನವನ್ನು ಧಾರೆ ಎರೆಯುತ್ತಿದೆ.
​ಈ ಬಾರಿಯ ಅಂತರರಾಷ್ಟ್ರೀಯ ಸಾಕ್ಷರತಾ ದಿನದ ಸಂದರ್ಭದಲ್ಲಿ, “ಸಾಕ್ಷರತೆಯಿಂದ ಸಮೃದ್ಧ ಸಮಾಜ ನಿರ್ಮಾಣ” ಎಂಬ ಉದ್ದೇಶದೊಂದಿಗೆ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ವಿವಿಧ ಜಾಗೃತಿ ಕಾರ್ಯಕ್ರಮಗಳು, ಉಚಿತ ಪುಸ್ತಕ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
​ಅಕ್ಷರ ಬಾರದವರಿಗೆ ಅಕ್ಷರ ಕಲಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸರ್ಕಾರ ಮತ್ತು ಸಂಸ್ಥೆಗಳ ಜೊತೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ಸಂಪೂರ್ಣ ಸಾಕ್ಷರ ಭಾರತದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಶುಭ ಹಾರೈಸೋಣ, ಅಕ್ಷರ ಕ್ರಾಂತಿಯಲ್ಲಿ ನಾವೂ ಭಾಗಿಯಾಗೋಣ
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ (ರಿ) ಸ್ಥಾಪಕ ಅಧ್ಯಕ್ಷರು ಶಿವಕುಮಾರ್ ಹೂಟಗಳ್ಳಿ

Search

Manaviyathe charitable trust

​ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಪರಿಚಯ
​ಮಾನವೀಯತೆಯ ಕುರಿತು ಹೇಳುವುದಾದರೆ ಸಾವಿರ ಪುಸ್ತಕಗಳನ್ನು ಬರೆದರೂ ಸಾಲದು, ಅದೊಂದು ಮಹಾಸಾಗರದಂತೆ. ನಿಮ್ಮಲ್ಲಿರುವ ಮಾನವೀಯತೆಯು ನಿಮ್ಮ ಸಂಸ್ಕಾರವನ್ನು ಎತ್ತಿಹಿಡಿಯುತ್ತದೆ. ಜೀವನದಲ್ಲಿ ಒಳ್ಳೆಯ ಗುಣಗಳಿದ್ದರೆ ಮಾತ್ರ ಸಾಲದು, ಅದರ ಜೊತೆಗೆ ‘ಮಾನವೀಯತೆ’ ಎಂಬ ಸಣ್ಣ ಗುಣ ನಮ್ಮಲ್ಲಿದ್ದರೆ ಮಾತ್ರ ಬದುಕಿಗೊಂದು ಅರ್ಥ ಮತ್ತು ಸಾರ್ಥಕತೆ ಸಿಗುತ್ತದೆ.
​ಜೀವನದಲ್ಲಿ ಶ್ರೀಮಂತ ಹಾಗೂ ಬಡವ ಎನ್ನುವುದು ಮುಖ್ಯವಲ್ಲ. ಶ್ರೀಮಂತನು ಒಳ್ಳೆಯ ಉಡುಪುಗಳನ್ನು ಧರಿಸಬಹುದು, ಆಸ್ತಿ-ಅಂತಸ್ತು ಹೊಂದಿರಬಹುದು; ಆದರೆ ಅವನಲ್ಲಿ ಮಾನವೀಯ ಗುಣಗಳಿಲ್ಲದಿದ್ದರೆ ಅವನನ್ನು ನಿಜವಾದ ಶ್ರೀಮಂತ ಎಂದು ಕರೆಯಲು ಸಾಧ್ಯವಿಲ್ಲ. ಮಾನವೀಯತೆ ಎನ್ನುವುದು ಕೇವಲ ಒಂದು ಶಬ್ದಕ್ಕೆ ಸೀಮಿತವಾಗಿಲ್ಲ. ಅದು ಕರುಣೆ, ಸೌಹಾರ್ದತೆ, ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ಉತ್ತಮ ವ್ಯಕ್ತಿತ್ವಗಳ ಸಮ್ಮಿಲನ. ಇರುವವರು ಇಲ್ಲದವರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೆರವಾಗುವುದೇ ನಿಜವಾದ ಮಾನವೀಯತೆ. ನಮ್ಮ ಪ್ರಕಾರ ಮಾನವೀಯತೆ ಉಳ್ಳವನೇ ಶ್ರೀಮಂತ, ಮಾನವೀಯತೆ ಇಲ್ಲದವನೇ ಬಡವ.
​ಕೋಟಿ ಕೋಟಿ ಹಣವಿದ್ದರೂ ಮೌಲ್ಯವಿಲ್ಲದ ಜೀವನ ವ್ಯರ್ಥ. ಜೀವನವೆಂಬ ದೋಣಿಗೆ ‘ಮಾನವೀಯತೆ’ ಎಂಬ ನಾವಿಕ ಹಾಗೂ ‘ದಾನಧರ್ಮ’ ಎಂಬ ಹುಟ್ಟು (ದೋಣಿ ನಡೆಸುವ ಕೋಲು) ಅತ್ಯಗತ್ಯ. ಜೀವನವು ಕೇವಲ ಹಣ, ಆಸ್ತಿ, ಅಂತಸ್ತು ಹಾಗೂ ಒಡವೆಗಳಿಂದ ಕೂಡಿರುವುದಕ್ಕಿಂತ ಖುಷಿ, ಪ್ರೀತಿ, ಸ್ಪಂದನೆ, ತಾಳ್ಮೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ್ದರೆ ಸಾಕು. ಆದ್ದರಿಂದ ಬದುಕಿನಲ್ಲಿ ನಾವೆಲ್ಲರೂ ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕಿದೆ. ‘ಮಾನವೀಯತೆ’ ಎಂಬ ಪದವೇ ಒಂದು ಅದ್ಭುತ ಶಕ್ತಿ; ಅದು ಮನಸ್ಸಿನಲ್ಲಿ ಅಪಾರ ಭಾವನೆಗಳನ್ನು ಮೂಡಿಸುತ್ತದೆ.
​ನಮ್ಮ ಸಂಸ್ಥೆಯಿಂದ ಒಂದೇ ಒಂದು ವಿನಂತಿ—ಮಾನವೀಯತೆ ಚಾರಿಟೇಬಲ್ ಟ್ರಸ್ಟ್‌ಗೆ ಸೇರ್ಪಡೆಯಾಗುವ ಪ್ರತಿಯೊಬ್ಬ ಸ್ವಯಂಸೇವಕರೂ ನಮ್ಮ ಮಾನವ ಸಂಪನ್ಮೂಲದ ನಾಯಕರು. ನೀವು ಈ ಸೇವಾ ಸಂಸ್ಥೆಯ ಮುಖ್ಯ ಅಂಗವಾಗಿದ್ದು, ಮಾನವೀಯತೆಯ ಕಾರ್ಯಗಳು ನಿಮ್ಮಿಂದಲೇ ಪ್ರಾರಂಭವಾಗಬೇಕು. ಅದಕ್ಕಾಗಿ ನಾವು ಒಂದು ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದು ಯಾರೋ ಒಬ್ಬರಿಂದ ಆಗುವ ಕೆಲಸವಲ್ಲ.
​ಮಾನವೀಯತೆಯ ಕುರಿತು ಚಿಂತನೆ ಹಾಗೂ ಕಾಳಜಿಯನ್ನು ನಿಮ್ಮಿಂದಲೇ ಪ್ರಾರಂಭಿಸಿ. ಸ್ವಯಂಪ್ರೇರಿತರಾಗಿ ನಮ್ಮ ಸಂಸ್ಥೆಗೆ ಸ್ವಯಂಸೇವಕರಾಗಿ ಬನ್ನಿ. ಮಾನವೀಯತೆ ಎಂಬುದು ಎಲ್ಲ ಧರ್ಮಗಳಿಗಿಂತ ಮಿಗಿಲಾದದ್ದು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಾಗ ಮಾತ್ರ ಇದರ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಬನ್ನಿ, ನಮ್ಮ ಹಾಗೂ ನಿಮ್ಮ ಸಂಸ್ಥೆಯ ಭಾಗವಾಗಿ ಸಮಾಜ ಸೇವೆಗೆ ಕೈಜೋಡಿಸಿ.
​- ಪ್ರಕಟಣೆ: ಆಡಳಿತ ಮಂಡಳಿ

Archive

Tags

Manaviyathe Gallery

WhatsApp
error: Content is protected !!